ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಸಿದ್ಧಕಟ್ಟೆಯವರ ಅರ್ಥಗಾರಿಕೆಯ ಶಿಸ್ತು ಮತ್ತು ಬದ್ಧತೆ

ಲೇಖಕರು :
ಟಿ.ಎ.ಎನ್.ಖ೦ಡಿಗೆ
ಗುರುವಾರ, ಜೂನ್ 5 , 2014

ಕೆಲವು ವರ್ಷಗಳ ಹಿಂದಿನ ಘಟನೆ. ಮೂಡಬಿದಿರೆಯ ಸಮೀಪದ ಅಶ್ವತ್ಥಪುರದಲ್ಲಿರುವ ಪ್ರಭಾಕರ ಭಟ್ಟರ ಮನೆಯಲ್ಲಿ ‘ಶಂಕರ ವಿಜಯ’ ತಾಳಮದ್ದಳೆ ನಡೆದಿತ್ತು. ಕೊರ್ಗಿ,ಮೇಲುಕೋಟೆ, ಜೋಷಿ ಮತ್ತು ಮೂಡಂಬೈಲು ಈ ಕೂಟವನ್ನು ಬಹಳ ಸಮರ್ಥವಾಗಿ ಮತ್ತು ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು. ಈ ಕೂಟದಲ್ಲಿ ಆರಂಭದಿಂದ ಕೊನೆಯವರೆಗೂ. ಒಬ್ಬ ಸಾಮಾನ್ಯ ಪ್ರೇಕ್ಷಕನಂತೆ ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿಯವರು ಉಪಸ್ಥಿತರಿದ್ದರು. ಕೂಟ ಮುಗಿದ ಮೇಲೆ ತನ್ನ ಸಂದೇಹಗಳನ್ನು ತನ್ನ ಗುರುಗಳಾದ ಕೊರ್ಗಿಯವರ ಜೊತೆ ಚರ್ಚಿಸಿದರು. ಇದೇ ಸಂದರ್ಭದಲ್ಲಿ ಈ ಕಾರ್ಯಕ್ರಮದ ಸಂಯೋಜಕರಾದ ಮೇನಕಾ ಟೆಕ್ಸ್ ಟೈಲ್ಸ್ ನ ಸದಾಶಿವ ಭಟ್ ಅವರು ಚೆನ್ನಪ್ಪ ಶೆಟ್ಟಿಯವರರಿಗೆ ಶಾಲು ಹೊದಿಸಿ ,ಅವರ ಉಪಸ್ಥಿತಿಯನ್ನು ಗೌರವಿಸಿದರು. ಆಗಲೇ ಚೆನ್ನಪ್ಪ ಶೆಟ್ಟಿಯವರು ಒಳ್ಳೆಯ ತಾರ ಮೌಲ್ಯ ಹೊಂದಿದ ‘ಎ’ ಗ್ರೇಡ್ ಕಲಾವಿದರಾಗಿದ್ದರು. ಆದರೂ ತಾನು ಇನ್ನೂ ಈ ಕ್ಷೇತ್ರದಲ್ಲಿ ಕಲಿಯುವುದಕ್ಕೆ ಬಹಳ ಇದೆ ಎಂದು ನಂಬಿದ್ದರು. ಅವರ ಅಂತರಂಗದ ಈ ವಿದ್ಯಾರ್ಥಿ ಪ್ರಜ್ಞೆಯೇ ಅವರನ್ನು ಯಕ್ಷಗಾನ ಕ್ಷೇತ್ಯ್ರದಲ್ಲಿ ಬಹಳ ಎತ್ತರಕ್ಕೆ ಕೊಂಡುಹೋಯಿತು.

ಇಂದಿನ ಬಹುತೇಕ ಯಕ್ಷಗಾನ ಕಲಾವಿದರಲ್ಲಿ ಇಲ್ಲದೆ ಇರುವ ಮತ್ತು ಇರಲೇಬೇಕಾದ ಕೆಲವು ಗುಣಗಳು ಚೆನ್ನಪ್ಪ ಶೆಟ್ಟಿಯವರಲ್ಲಿ ಇತ್ತು. ಕೆಲವು ತಾಳಮದ್ದಳೆ ಕೋಟಗಳಲ್ಲಿ ಅರ್ಥದಾರಿ ತನ್ನ ಅರ್ಥ ಮುಗಿದರೆ ಸಾಕು, ಪ್ಯಾಂಟು ಸಿಕ್ಕಿಸಿಕೊಂಡು ಸಂಭಾವನೆ ಪಡೆದು ಓಡಿ ಹೋಗುತ್ತಾರೆ. ತನ್ನ ಎದುರು ಪಾತ್ರದಾರಿಯು ತನ್ನ ಜೊತೆಗೆ ಸಂಭಾಷಣೆ ಮಾಡುತ್ತಿದ್ದರೂ ಸಂಭಾಷಣೆ ಮುಗಿಸುವ ಮೊದಲೇ ತನಗೆ ಇನ್ನು ಪದ್ಯ ಇಲ್ಲ ಎಂಬ ಕಾರಣದಿಂದ ವೇದಿಕೆಯಿಂದ ಇಳಿದು ಹೋಗುವ ಅರ್ಥದಾರಿಗಳಿದ್ದಾರೆ.ಆದರೆ ಚೆನ್ನಪ್ಪ ಶೆಟ್ಟಿಯವರು ತನಗೆ ಪದ್ಯವಿಲ್ಲದಿದ್ದರೂ ಪ್ರಸಂಗದ ಒಂದು ಹಂತ ಮುಗಿಯದೇ ವೇದಿಕೆಯಿಂದ ನಿರ್ಗಮಿಸುತ್ತಿರಲಿಲ್ಲ. ವ್ಯಕ್ತಿಯ ವೈಭವೀಕರಣಕ್ಕಿಂತಲೂ, ಪ್ರಸಂಗದ ಯಶಸ್ಸು ಅವರಿಗೆ ಬಹಳ ಮುಖ್ಯವಾಗಿರುತ್ತಿತ್ತು. ಈ ರೀತಿಯ ಸಮಷ್ಟಿ ಪ್ರಜ್ಞೆಯಿಂದ ತಾಳಮದ್ದಳೆಗಳನ್ನು ಕೊಂಡುಹೋಗುವ ಕಲಾವಿದರು ಕಡಿಮೆಯಾಗುತ್ತಿದ್ದಾರೆ.

ಸಾಮಾನ್ಯವಾಗಿ ತಾಳಮದ್ದಳೆಗಳಲ್ಲಿ ಪ್ರಸಂಗದ ಎಲ್ಲ ಪದ್ಯಗಳನ್ನು ಹಾಡುವ ಕ್ರಮವಿಲ್ಲ. ಭಾಗವತರು ಮತ್ತು ಅರ್ಥದಾರಿಗಳ ಹೊದಾಣಿಕೆಯಲ್ಲಿ ಪ್ರಸಂಗ ಪ್ರಮುಖ ಪದ್ಯಗಳ ಆಯ್ಕೆ ನಡೆಯುತ್ತದೆ. ಇಂಥ ಸಂದರ್ಭಗಳಲ್ಲಿ ಅರ್ಥದಾರಿಗಳು ಭಾಗವತರು ಹೇಳಿದ ಪದ್ಯಗಳನ್ನೇ ವ್ಯಾಖ್ಯಾನ ಮಾಡಿ ಮುಗಿಸುತ್ತಾರೆ. ನಾನು ಗಮನಿಸಿದಂತೆ ಚೆನ್ನಪ್ಪ ಶೆಟ್ಟಿಯವರು ಪ್ರಸಂಗದ ಹಿಂದಿನ ಎಲ್ಲಾ ಪದ್ಯಗಳ ಮುಖ್ಯ ಆಶಯಗಳನ್ನು ಬಹಳ ಸಕ್ಷಿಪ್ತವಾಗಿ ಹೇಳಿ ಮುಂದಿನ ಪದ್ಯವನ್ನು ಭಾಗವತರಿಗೆ ಎತ್ತಿಕೊಟ್ಟು ಸಹಕರಿಸುತ್ತಿದ್ದರು. ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ ,ಚೆನ್ನಪ್ಪ ಶೆಟ್ಟಿಯವರಿಗೆ ಸಭೆಯ ‘ಎ’ಗ್ರೇಡ್ ಪ್ರೇಕ್ಷಕರು ಮಾತ್ರ ಮುಖ್ಯವಾಗದೆ, ಸಭೆಯ ಜನ ಸಾಮಾನ್ಯರು ಕೂಡ ಅಷ್ಟೇ ಮುಖ್ಯವಾಗುತ್ತಿದ್ದರು.

ಪ್ರಸಂಗದ ಒಂದು ಪಾತ್ರವನ್ನು ಶ್ರೋತೃಗಳ ಮುಂದೆ ಕಡೆದು ನಿಲ್ಲಿಸುವುದು ಸುಲಭದ ಕೆಲಸವಲ್ಲ. ರಾಮಾಯಣ,ಮಹಾಭಾರತ, ಭಾಗವತ, ಪುರಾಣ ,ಭಾರತೀಯ ತತ್ವಶಾಸ್ತ್ರ ಇವುಗಳ ಅರಿವು ಇರಬೇಕಾಗುತ್ತದೆ. ಕೇವಲ ಅರಿವು ಇದ್ದರೆ ಸಾಲದು ಅದು ನೆನೆಪೂ ಇರಬೇಕು. ಔಚಿತ್ಯವನ್ನು ಅರಿತು ಪ್ರಯೋಗಿಸಲು ಗೊತ್ತಿರಬೇಕು. ಎಂಥ ಖಳ ಪಾತ್ರವಾದರೂ ಆ ಸಂದರ್ಭಕ್ಕೆ ‘ಅದು ಹೇಳಿದ್ದು ಸರಿ’ ಎಂಬ ಹಾಗೆ ಮಾಡಬೇಕು. ಇಂಥ ಅದ್ಭುತ ಪ್ರತಿಭೆಯ ಮಾತಿನ ಕೌಶಲ ಶೇಣಿಯಂಥ ಮೇರು ಕಲಾವಿದರಿಗೆ ಇತ್ತು. ಚೆನ್ನಪ್ಪ ಶೆಟ್ಟಿಯವರು ಇಂಥ ಪ್ರತಿಭಾವಂತರಾಗಿದ್ದರು.

ತಾಳಮದ್ದಳೆಯೊ೦ದರಲ್ಲಿ ಸಿಧ್ಧಕಟ್ಟೆಯವರು (ಚಿತ್ರ ಕೃಪೆ : ರಾಮ್ ನರೇಶ್ ಮ೦ಚಿ)
ಸಂಸ್ಕ್ರತ ಮತ್ತು ಕನ್ನಡ ಭಾಷೆಗಳ ಮಿಶ್ರದ ಮಧ್ಯಮ ಮಾರ್ಗವನ್ನು ಅವರು ಅನುಸರಿಸುತ್ತಿದ್ದರು. ಅವರು ಸಂಸ್ಕ್ರತೇತರ ಪರಿಸರದಿಂದ ಬಂದವರಾದರೂ ಸಂಸ್ಕ್ರತ ಭಾಷೆಯಲ್ಲಿ ಒಳ್ಳೆಯ ಹಿಡಿತ ಸಾಧಿಸಿದ್ದರು. ಕೇವಲ ನಾಲ್ಕನೆ ತರಗತಿಯವರೆಗೆ ಓದಿದ ಇವರು ಇದನ್ನೆಲ್ಲ ಏಕಲವ್ಯನಂತೆ ಸಾಧನೆಯಿಂದ ಸಿದ್ಧಿಸಿಕೊಂಡಿದ್ದರು. ಅನೇಕ ಸುಭಾಷಿತಗಳು , ಪ್ರಸಿದ್ಧವಾದ ನೀತಿ ವಾಕ್ಯಗಳು , ಕುಮಾರವ್ಯಾಸ ಭಾರತ, ಜೈಮಿನಿ ಭಾರತ , ತೊರವೆ ರಾಮಾಯಣ ಮೊದಲಾದ ಕಾವ್ಯಗಳ ಅನೇಕ ಪದ್ಯಗಳು ಅವರ ನಾಲಗೆ ತುದಿಯಲ್ಲಿದ್ದವು. ಅವುಗಳನ್ನು ಸಂದರ್ಭಾನುಸಾರವಾಗಿ ಸ್ಪಷ್ಟವಾದ ಉಚ್ಚಾರದಲ್ಲಿ ಅವರು ಹೇಳುವಾಗ ಶ್ರೋತ್ರಗಳು ಮೂಕವಿಸ್ಮಿತರಾಗುತ್ತಿದ್ದರು. ಚೆನ್ನಪ್ಪ ಶೆಟ್ಟಿಯವರಿಗೆ ಯಕ್ಷಗಾನ ಕೇವಲ ಒಂದು ವೃತ್ತಿಯಾಗದೆ ಅದುವೆ ಬದುಕಾಗಿತ್ತು. ಮಾತ್ರವಲ್ಲ ತನ್ನ ವ್ಯಕ್ತಿತ್ವದ ವಿಕಸನಕ್ಕೆ ಒಂದು ಮಾಧ್ಯಮವಾಗಿತ್ತು. ಯಕ್ಷಗಾನಕ್ಕೆ ಸಾಮಾನ್ಯವಾಗಿ ಅಂಟಿಕೊಂಡಿರುವ ದುಶ್ಚಟಗಳಿಂದ ದೂರನಿಂತು, ಅಧ್ಯಯನವನ್ನೆ ಚಟವನ್ನಾಗಿ ಮಾಡಿಕೊಂಡಿದ್ದ ಚೆನ್ನಪ್ಪ ಶೆಟ್ಟಿಯವರ ,ಉಭಯ ತಿಟ್ಟುಗಳಲ್ಲಿಯೂ ತನ್ನ ತಾರಮೌಲ್ಯವನ್ನು ಕೊನೆಯವರೆಗೂ ಉಳಿಸಿಕೊಂಡಿದ್ದರು.

ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದರ ಬಗ್ಗೆ ಅಪಾರ ಗೌರವವನ್ನು ಚೆನ್ನಪ್ಪ ಶೆಟ್ಟಿಯವರು ಹೊಂದಿದ್ದರು. ಒಂದು ಸಲ ತಾಳಮದ್ದಳೆಯ ನ್ನು ಸಂಘಟಿಸುವ ಸಂದರ್ಭದಲ್ಲಿ ಒಂದು ಪ್ರಸಂಗದ ಪ್ರಧಾನ ಪಾತ್ರವನ್ನು ಮಾಡುವಂತೆ ಅವರನ್ನು ವಿನಂತಿಸಲಾಯಿತು.ಆಗ ಅವರು ಉಳಿದ ಕಲಾವಿದರು ಯಾರೆಲ್ಲ ಇದ್ದಾರೆ ಎಂದು ಕೇಳಿದರು. ಉಳಿದ ಕಲಾವಿದರ ಹೆಸರುಗನ್ನು ಹೇಳಿದಾಗ “ ನಾನು ಇದರಲ್ಲಿ ಮುಖ್ಯ ಪಾತ್ರ ಮಾಡುವುದಿಲ್ಲ, ನನ್ನಿಂದ ಹಿರಿಯ ಕಲಾವಿದರು ಇದರಲ್ಲಿ ಇದ್ದಾರೆ, ಅವರಿಗೆ ಬೇಸರವಾದೀತು. ಮುಖ್ಯ ಪಾತ್ರ ಅವರೇ ಮಾಡಲಿ” ಎಂದು ಹೇಳಿ ತಾನು ಎರಡನೆಯ ಮುಖ್ಯ ಪಾತ್ರ ಮಾಡುವುದಾಗಿ ಒಪ್ಪಿಕೊಂಡರು.ಇಂತಹ ಸೌಜನ್ಯದ ಕಲಾವಿದರು ಬಹಳ ಅಪೂರ್ವ .

ಮಾಣಿಯಲ್ಲಿ ಒಂದು ಸಲ ‘ಕರ್ಮಬಂಧನ’ ಪ್ರಸಂಗದಲ್ಲಿ ಚೆನ್ನಪ್ಪ ಶೆಟ್ಟಿಯವರು ಭೀಷ್ಮನ ಪಾತ್ರ ಮಾಡಿದ್ದರು. ಕೃಷ್ಣನ ಪಾತ್ರವನ್ನು ಪ್ರಸಿದ್ಧ ಮತ್ತು ಹಿರಿಯ ಕಲಾವಿದರೊಬ್ಬರು ಮಾಡಿದ್ದರು.’ಪಂಕಜಾಕ್ಷ ಭೇದವೇಕೋ ಕಿಂಕರನಲ್ಲವೇ ನಾನು’ಎಂಬ ಪದ್ಯವನ್ನು ಬಹಳ ಸುಂದರವಾಗಿ ಭೀಷ್ಮನಾಗಿ ಚೆನ್ನಪ್ಪ ಶೆಟ್ಟಿಯವರು ವ್ಯಾಖ್ಯಾನ ಮಾಡಿದರು. ಆದರೆ ಮುಂದಿನ ಪದ್ಯಕ್ಕೆ ಕೃಷ್ಣ ಬರಲೇ ಇಲ್ಲ. ಸಂಭಾಷಣೆ ಎಲ್ಲೆಲ್ಲೋ ಹೋಯಿತು.’ ‘ನನ್ನಲ್ಲಿ ಯಾವ ಬೇಧವನ್ನು ನೀನು ನೋಡಿದೆ ?’ ಎಂದು ಎರಡು ಮೂರು ಸಲ ಭೀಷ್ಮ ಕೇಳಿ-“ಭೇದವೂ ನಿಮ್ಮೊಲಗೆ....?” ಎಂಬ ಕೃಷ್ಣನ ಪದ್ಯದಲ್ಲಿಗೆ ಬರಬೇಕಾದರೆ ಸಾಕೋ ಸಾಕಾಗಿತ್ತು. ಆದರೂ ಭೀಷ್ಮನ ಪಾತ್ರ ಮಾಡಿದ ಚೆನ್ನಪ್ಪ ಶೆಟ್ಟಿಯವರು ತಾಳ್ಮೆಗೆಡದೆ ಕೃಷ್ಣನ ಪಾತ್ರ ಮಾಡಿದ ಹಿರಿಯ ಕಲಾವಿದರನ್ನು ಗೌರವದಿಂದ ನಡೆಸಿಕೊಂಡರು. ಸುಧನ್ವಾರ್ಜುನ ಪ್ರಸಂಗದ ತಾಳಮದ್ದಳೆಯಲ್ಲಿ ಸುಧನ್ವನ ಪಾತ್ರ ವಹಿಸಿದ ಚೆನ್ನಪ್ಪ ಶೆಟ್ಟಿಯವರು ಒಂದು ಸಂದರ್ಭದಲ್ಲಿ ಯುದ್ಧ ಭೂಮಿಯ ವರ್ಣಾನೆಯನ್ನು ಲಕ್ಷ್ಮೀಶನ ಒಂದು ಪದ್ಯವನ್ನು ಹೇಳುವುದರ ಮೂಲಕ ವಿವರಿಸಿದರು.ಆ ಪದ್ಯ ಹೀಗಿದೆ-

ಕೆಡೆದೊಡಲ ಸೀಳಿಂದ ಕಡಿವಡೆದ ತೋಳಿಂದ
ತೊಡೆಯುಡಿದ ತುಂಡಿಂದ ನೆಣವಸೆಯ ಜೊಂಡಿಂದ
ಬಿಡುಮಿದುಳ ತುಂಡದಿಂ ತಂಡದಿಂ ರುಂಡದಿಂ ಮುಂಡದಿಂ ಖಂಡದಿಂದ
ಅಡಗುಗಳ ತಿರುಳಿಂದ ನಿಡುನರದ ಕರುಳಿಂದ
ಕಡಲಿಡುವ ನೆತ್ತರಿಂದೆಡವಿಡದೆ ಸತ್ತರಿಂ
ದಿಡಿದಿರ್ದುದಾ ರಣದಲೋರಣದ ಮಾರಣದ ಕಾರಣದ ಪೂರಣದೊಳು


ಇದನ್ನು ಕೇಳಿಸಿಕೊಂಡ ಎದುರಿನ ಅರ್ಥದಾರಿಯು “ನೀನು ಇದನ್ನೆಲ್ಲ ಬಾಯಿಪಾಠ ಮಾಡಿಕೊಂಡಿದ್ದಿ. ಚೆನ್ನಾಗಿದೆ”. ಎಂದು ಕೊಂಕುನುಡಿದರು. ‘ಬಾಯಿ ಪಾಠ ಎಂದರೇನು? ಅರ್ಥ ಗೊತ್ತಿಲ್ಲದೆ ಹೇಳುವುದು ಬಾಯಿಪಾಠ , ಈಗ ನಾನು ಹೇಳಿದ ಯಾವ ವಾಕ್ಯ ,ಯಾವ ಶಬ್ದ ಬೇಕಿದ್ದರೂ ಕೇಳು ನಾನು ಅರ್ಥ ವಿವರಿಸುತ್ತೇನೆ.’ ಎಂದು ಸುಧನ್ವ ಮರುಸವಾಲು ಹಾಕಿದ. ಕೊನೆಗೆ ಚರ್ಚೆ ಸುಖಾಂತ್ಯವಾಯಿತು. ಇದು ಅವರ ನಿಶ್ಚಿತ ಜ್ಞಾನಕ್ಕೆ ಒಂದು ಉದಾಹರಣೆಯಾಗಿದೆ.

ಸಿದ್ಧರಸ ಎಂಬುದೊಂದು ಕವಿಸಮಯ. ಯಾವುದೇ ಲೋಹವನ್ನು ಅದರಲ್ಲಿ ಮುಳುಗಿಸಿದರೆ ಅದು ಚಿನ್ನವಾಗುತ್ತದೆ. ಚೆನ್ನಪ್ಪ ಶೆಟ್ಟಿಯವರು ಯಾವುದೇ ಪಾತ್ರವನ್ನು ಮಾಡಿದರೂ ,ಅದು ಸಿದ್ಧರಸದಲ್ಲಿ ಮಿಂದು ಬಂದು ಅಪ್ಪಟ ಚಿನ್ನವಾಗುತ್ತಿತ್ತು. ಇಂಥ ವ್ಯಕ್ತಿತ್ವದ ಸಿದ್ಧಕಟ್ಟೆ ಚಿನ್ನಪ್ಪ ಶೆಟ್ಟಿಯವರು ಈಗ ಕೇವಲ ಬಂದು ನೆನಪಾಗಿದ್ದಾರೆ. ಇಂಥ ನೆನಪುಗಳೇ ಯಕ್ಷಗಾನವನ್ನು ಸಾವಿರದಂತೆ ಮಾಡಿವೆ.



ಕೃಪೆ : http://khandathunda.blogspot.in


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ashok halai(9/19/2014)
utthamvada chitrna




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ